ಶನಿವಾರ, ಮೇ 4, 2013

ಬನ್ನಿ.. ಮತದಾನ ಮಾಡೋಣ!! 
ನೋಡ್ತಾ ನೋಡ್ತಾ ಇದ್ದ ಹಾಗೆ ಮತ್ತೊಮ್ಮೆ ಚುನಾವಣಾ ಎದುರು ಬಂದು ನಿಂತಿದೆ.   ಪ್ರತಿದಿನ ಪತ್ರಿಕೆಗಳಲ್ಲಿ ಚುನಾವಣಾ  ಪ್ರಕ್ರಿಯೆಯ ಬಿಸಿ ಬಿಸಿ ಸುದ್ದಿಗಳು, ಬೆಳಗಿನ ಚಹದೊಂದಿಗೆ ಚಪ್ಪರಿಸಲು  ಚುರುಮುರಿಯಷ್ಟೇ ರುಚಿಕರ !!   ಪಕ್ಷದ ಅಭ್ಯರ್ಥಿಯಾಗಲು  ಟಿಕೇಟು ಗಿಟ್ಟಿಸಲು ಹೋರಾಟ ,, ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರಾಟ ..!!! ಇವರೆಲ್ಲ ಆ ಪಕ್ಷದ ಸಿದ್ಧಾಂತಗಳಿಗೆ ಮೆಚ್ಚಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿದರೆ ನಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ ಎಂದೇ ಹೇಳಬೇಕು ಅಷ್ಟೇ ! ಅಂದ ಹಾಗೆ ಈಗಿನ ಪಕ್ಷಗಳಿಗೆ ತತ್ವ ಸಿದ್ದಾಂತ ಗಳಿವೆಯ ? ಎಂದು ಮಾತ್ರ ಕೇಳಬೇಡಿ!!


ಈ ಸಲದ ಚುನಾವಣಾ ನನಗೆ  ವಿಶೇಷ .. ಏಕೆಂದರೆ ಈದೆ ಪ್ರಥಮ ಬಾರಿಗೆ ನಾನು ವೋಟ್ ಹಾಕುವುದರ ಮೂಲಕ ನನ್ನ ನಾಗರೀಕ ಹಕ್ಕನ್ನು ಚಲಾಯಿಸುತ್ತಿದ್ದೇನೆ!! ಚಿಕ್ಕಂದಿನಲ್ಲಿ ತಂದೆ ತಾಯಿಯ ಉಗುರಿನ ಮೇಲಿನ ಶಾಯಿಯ ಕಲೆ ನೋಡಿ ನಾನು ವೋಟ್ ಹಾಕುತ್ತೇನೆ ಎಂದು ಹಠ ಮಾಡುತ್ತಿದ್ದೆ. ಅದರಂತೆ ಉಗುರಿನ ಮೇಲೆ ಪೆನ್ನಿನ ಶಾಯಿ ಬಳಿದು ವೋಟ್ ಹಾಕಿ ಬಂದವರಂತೆ ಬೀಗುತ್ತಿದ್ದೆ.. !! ಆಗೆಲ್ಲ ಚುನಾವಣೆ ಎಂದರೇನು ? ಯಾಕಾಗಿ ನಡೆಯುತ್ತದೆ ? ಏನೂ ಸರಿಯಾಗಿ ತಿಳಿದಿರಲಿಲ್ಲ .. ಮುಖ್ಯ ಮಂತ್ರಿ, ಪ್ರಧಾನ ಮಂತ್ರಿ ಎಂದರೆಲ್ಲ ಕೇವಲ ಬಾಯಿಪಾಠ ಹೇಳುವಾಗ ಮಾತ್ರ ನೆನಪಿಟ್ಟುಕೊಳ್ಳಬೇಕಾದಂಥವರು  ಎಂದಷ್ಟೇ ತಿಳಿದಿತ್ತು..!!


೨೦ ೦ ೮ ರ ಚುನಾವಣೆಯಲ್ಲಿ ಮುಂದಿನ ಸಲ ನಾನೂ ವೋಟ್ ಹಾಕಬಹುದು ಎಂದು ಸಿಕ್ಕಾಪಟ್ಟೆ ಗತ್ತಿನಿಂದ ಎಲ್ಲರ ಬಳಿಯೂ ಹೇಳಿಕೊಂಡು ಓಡಾಡಿದ್ದೆ .. ಆದರೆ ಅಂದು ಇದ್ದ ಉತ್ಸಾಹ,, ಹುಮ್ಮಸ್ಸು,, ಕುತೂಹಲ ಅರ್ಧರಷ್ಟೂ ಇಂದು ಉಳಿದಿಲ್ಲ ಎಂದು ಹೇಳಿಕೊಳ್ಳಲು ವಿಷಾದವೆನಿಸುತ್ತಿದೆ..


ಯಾಕೆ ಹೀಗಾಯ್ತು??
ಈ ಐದು ವರ್ಷಗಳ ಕಾಲ ಕರ್ನಾಟಕ ಸರ್ಕಾರದ ಏಳು ಬೀಳುಗಳನ್ನು ಕಂಡವರು ಈ ಪ್ರಶ್ನೆ ಕೇಳಲಿಕ್ಕಿಲ್ಲವೇನೋ ...!! ಈ ಐದು ವರ್ಷಗಳಲ್ಲಿ ಕರ್ನಾಟಕ ಕಂಡಿದ್ದು ೩ ಮುಖ್ಯ ಮಂತ್ರಿಗಳನ್ನು !!
ನಮ್ಮ ಬೇರೆ ರಾಜ್ಯಗಳ ಗೆಳತಿಯರು ಯಡಿಯೂರಪ್ಪನ ಹೆಸರು ಗಟ್ಟು  ಹೊಡೆಯುವುದರೋಳಗಾಗಿ ಸದಾನಂದ ಗೌಡ ಬಂದಿದ್ದಾಯ್ತು .. ನಂತರ ಕೆಲವೇ ತಿಂಗಳಲ್ಲಿ ಜಗದೀಶ್ ಶೆಟ್ಟ ರ್ ..!! ಒಳ್ಳೆ ಖೊಖೊ ಆಡ್ತಾ ಇದಾರೆನೋ ಎಂಬಂತೆ .. !!


 ಭವಿಷ್ಯದ ಭವ್ಯ ಭಾರತದ ರೂವಾರಿಗಳಾದ ನಾವುಗಳೇ ಈ ವ್ಯವಸ್ಥೆ ಯಿಂದ ರೋಸಿ ಹೋಗಿದ್ದೆವೆ.. ನಾವೇ  ಈ ಥರದ ಮನೋಭಾವ ಹೊಂದಿದರೆ ದೇಶದ ಮುಂದಿನ ಗತಿ ಏನಾಗಬಹುದು???

 ನಮ್ಮ ಮನಸ್ಥಿತಿ ಬದಲಾಗಲು ಕಾರಣವನ್ನು ನಾವು ಸುಲಭವಾಗಿ ಬೇರೆಯವರ ಮೇಲೆ ಹೊರಿಸಬಹುದು.. ಇದರಲ್ಲಿಯೂ ನಾವು ನಮ್ಮ ರಾಜಕಾರಣಿಗಳನ್ನು ಅನುಸರಿಸಿದಂತಾಗುತ್ತದೆಯೇ ಹೊರತು ಯಾವುದೇ ಉತ್ತರವನ್ನು ಪಡೆಯಲಾಗುವುದಿಲ್ಲ..


ಹಾಗಿದ್ದಲ್ಲಿ ತಪ್ಪು ಯಾರದ್ದು???

ಈ ತೆರನಾದ (ಅ)ವ್ಯವಸ್ಥೆಗೆ ಒಬ್ಬರನ್ನು ಅಥವಾ ಇಬ್ಬರನ್ನು ದೂಷಿಸಿ ಪ್ರಯೋಜನವಿಲ್ಲ... ತಪ್ಪು ನಮ್ಮಲ್ಲೇ ಇದೆ...

ಸುಲಭವಾಗಿ ಸಿಕ್ಕಿದ್ದಕ್ಕೆ ಕೈ ಚಾಚುವ ನಮ್ಮ ಮನೋಭಾವದಲ್ಲಿದೆ...
ದುಡ್ಡಿಗಾಸೆಗಾಗಿ  ಬಾಯ್ಬಿಡುವ ಹೆಣದಂತೆ ಆಡುವ ನಮ್ಮ ವ್ಯಕ್ತಿತ್ವದಲ್ಲಿದೆ.. 
ಹತ್ತರೊಳಗೆ ಹನ್ನೊಂದು ಎಂದುಕೊಂಡು ನಮ್ಮ ಸ್ವಂತಿಕೆ ಕಳೆದುಕೊಳ್ಳುವ ಹೇಡಿತನದಲ್ಲಿದೆ..

ಇದೆಲ್ಲ ಬರಿ ಬರೆಯಲಿಕ್ಕೆ ಚೆಂದ .. ವಾಸ್ತವಕ್ಕೆ ಇಳಿದರೆ ಅದರ ಆಳ ತಿಳಿಯುತ್ತದೆ ಎಂದು ನೀವು ಮೂಗು ಮುರಿದರೆ ನಾನು ಅದಕ್ಕೆ ಸಮ್ಮತಿಸುತ್ತೇನೆ.

ಹೌದು .. ನೀವು ಹೇಳಿದ್ದು ಸರಿ..
ಸ್ವಾತಂತ್ರ್ಯ ಸಿಕ್ಕು ೬೬  ವರ್ಷಗಳಾದರೂ ನಾವಿನ್ನು ಅಭಿವ್ರದ್ಧಿ ಹೊಂದುತ್ತಲೇ ಇದ್ದೇವೆ .. ನಮ್ಮಲ್ಲಿ ಏನು ಕಡಿಮೆ???
ಫಲವತ್ತಾದ ಭೂಮಿ ,!! ನಿತ್ಯ ಹರಿದ್ವರ್ಣದ ಕಾಡುಗಳು ..!!  ಚಿನ್ನ ,, ಕಬ್ಬಿಣ ,,ಮ್ಯಾಂಗನೀಸ್ ಇತ್ಯಾದಿ ಅದಿರುಗಳುಳ್ಳ ನೆಲ.... !!

ಎಲ್ಲಕ್ಕಿಂತ ಮುಖ್ಯವಾಗಿ ಜಗತ್ತಿನ ಅತಿ ಬುದ್ದಿವಂತ ಪ್ರಾಣಿ ನಮ್ಮ ದೇಶದಲ್ಲೇ ಪ್ರತಿವರ್ಷ ಕೋಟಿಗಟ್ಟಲೆ ಹುಟ್ಟುತ್ತಿವೆ ... ಈ ಅತಿ ಬುದ್ಧಿವಂತ ಪ್ರಾಣಿ ತನ್ನ ಬುದ್ದಿಯನ್ನು ಉಪಯೋಗಿಸದೆ ತನ್ನನ್ನು ತಾನು ಹೊರೆ ಎಂದು ಭಾವಿಸಿ ಕೊಳ್ಳುತ್ತಿದೆ ..!!

ಎಲ್ಲವನ್ನು ಹೊಂದಿರುವ ನಾವು ಏನು ಇಲ್ಲದಿರುವವರ ಥರ ನಮ್ಮ ದೇಶವನ್ನು ಚೀನಾ ಅಮೆರಿಕಕ್ಕೆ ಹೋಲಿಸಿ ಮರುಗುತ್ತೇವೆ... 
ನಮ್ಮನ್ನು ನಾವೇ ತುಚ್ಚವಾಗಿ ಕಂಡರೆ ಬೇರೆಯವರು ಏನೆಂದು ಯೋಚಿಸಬಹುದು ??? ಸ್ವಲ್ಪ ಯೊಚಿಸಿ.....
"ಭಾರತೀಯರಿಗೆ ಕೇವಲ ಆಳಿಸಿ ಕೊಂಡು  ಅಭ್ಯಾಸ .. ಆಳಲು ಅವರು ಅರ್ಹರಲ್ಲ .." ಎಂದು ವದರಿ ಹೋದ ಆಂಗ್ಲರಿಗೆ ನಾವು ಎದುರೇಟು ಕೊಡಬೇಕು ತಾನೇ???


ಹೌದು ... ನಮ್ಮೆಲ್ಲರ ಮನಸಿನಲ್ಲಿ ಇರುವುದೂ ಅದೆ... ! ಬ್ರಷ್ಟಾಚಾರ ಮುಕ್ತ ಪ್ರಜಾಸ್ನೇಹಿ ಸರ್ಕಾರ ...
ಅದನ್ನು ವಾಸ್ತವ ಮಾಡಲು ಇರುವ ಒಂದು ಅವಕಾಶವೆಂದರೆ ಚುನಾವಣೆ !!


ಎಲ್ಲರು ಒಟ್ಟಾಗಿ ಇದ್ದುದರಲ್ಲಿ ಕಡಿಮೆ ಬ್ರಷ್ಟ ಅಭ್ಯರ್ಥಿಗೆ ವೋಟ್ ಹಾಕಿ ಎಂದರೆ ಅದೂ  ತಪ್ಪಾಗುತ್ತದೆ...  ಅದೇ ಕಡಿಮೆ ಬ್ರಷ್ಟ ಅಭ್ಯರ್ಥಿ ಅಧಿಕಾರಕ್ಕೆ ಬಂಡ ನಂತರ ಉಳಿದ ಕುಳಗಳಿಗಿಂತ ದೊಡ್ಡ ಕುಳವಾಗಿ ಬಿಡುತ್ತಾನೆ ಎಂದು ನಾವು ನಮ್ಮ ಹಿಂದಿನ ತಪ್ಪಿನಿಂದ ಪಾಠ ಕಲಿತಿದ್ದೆವೆ... !!


ಹಾಗಾದರೆ ತಾತ್ಪರ್ಯ ಏನು???
ವೋಟ್ ಮಾಡಬೇಕಾದದ್ದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ... ಕರ್ತವ್ಯಕ್ಕಿಂತ ಹೆಚ್ಚಾಗಿ ಅದು ಅವರ ಹಕ್ಕು... ತಪ್ಪು ಮಾಡಿದವರಿಗೆ ಶಿಕ್ಷೆ ಯಾಗಲೇ ಬೇಕು.. ಅದು ಈಗ ಮತದಾರರ ಕೈಯಲ್ಲಿದೆ... ನಾವು ಬಯಸುತ್ತಿರುವುದು ಒಬ್ಬ ವಿದ್ಯಾವಂತ ದಕ್ಷ ನಾಯಕರನ್ನು... ಅಂಥವರು ಭಾರತವನ್ನು ಮುನ್ನೆಡೆಸಲು ಮುಂದಾಗುವ ತನಕ ನಾವು ಆಶಾವಾದಿಗಳಾಗಿರೋಣ ... 
ಹಾಗಿದ್ದರೆ ಎಲ್ಲರೂ ನಾಳೆ ವೋಟ್ ಹಾಕ್ತೀರಾ ಅಲ್ವ????
ಶನಿವಾರ, ಆಗಸ್ಟ್ 18, 2012

ರಜಾ.. ಮಜಾ - ಸಜಾ !!

ಮನೆಗೆ ಬಂದು ಒಂದು ತಿಂಗಳಾಗ್ತಾ ಇದೆ.. ಹಾಸ್ಟೆಲ್ ನಲ್ಲಿ ಇದ್ದಾಗ ಮನೆ - ಮನೆ ಅಂತ ಬಡಬಡಿಸಿದ್ದೊಂದೇ ಬಂತು!! ಮನೆಗೆ ಬಂದು  ಮಾಡಿದ ಘನಂದಾರಿ ಕೆಲಸಗಳಾದರೂ ಏನು ಎಂದು ಯೋಚಿಸಿದಾಗ ನಗು.. ಕೋಪ ..  ಎಲ್ಲವು ಬರುತ್ತದೆ..
ದಿನಕ್ಕೆ ಹತ್ತು ತಾಸು ನಿದ್ದೆ.. ಹರಟೆ ,, ಫೇಸ್ ಬುಕ್,, ಬ್ಲಾಗು.. ಮೊಬೈಲು,,, ಮಧ್ಯದಲ್ಲಿ ಅಮ್ಮ ಹೇಳಿದ ಚಿಕ್ಕ ಪುಟ್ಟ ಕೆಲಸ ಮಾಡುವುದು.. ಹೀಗೆ ಸಖಾಸುಮ್ಮನೆ ಕಾಲಹರಣ ಮಾಡ್ತಾ ಇದ್ದೇನೆ..

ಪ್ರತಿ ಸಲ ರಜೆ ಬಂದಾಗಲೂ ನಾನು ಇದನ್ನು ಮಾಡಬೇಕು  ಅದನ್ನು ಮಾಡಬೇಕು ಅಂತ ಸಿಕ್ಕಾಪಟ್ಟೆ ಪ್ಲಾನ್ ಮಾಡಿಕೊಳ್ಳುವುದಂತು ಹೌದು ... ಅವುಗಳಲ್ಲಿ ಒಂದನ್ನಾದರೂ ಸರಿಯಾಗಿ ಮುಗಿಸಿದ್ದರೆ ಕೇಳಿ!!! ಎಲ್ಲವೂ ಅರ್ಧಕ್ಕೆ ಅಂತ್ಯ ಕಂಡವುಗಳೇ !! ಇದರಿಂದಾಗಿಯೇ ಅಮ್ಮ ನನ್ನ ಮೇಲೆ ಕೂಗಾಡುವುದು ತಪ್ಪುವುದಿಲ್ಲ!!
ಚಿತ್ರ ಬಿಡಿಸೋಣ ಎಂದು ಹಾಳೆ,, ಪೆನ್ಸಿಲ್ಲು .. ಬಣ್ಣ ಬ್ರಶ್ಹು ಇವೆಲ್ಲವನ್ನು ಇಟ್ಟುಕೊಂಡು ಶುರುಮಾಡುತ್ತೇನೆ.. ನಿಜ.. ಮಧ್ಯದಲ್ಲಿ ಯಾವುದಾದರೂ ಗೆಳತಿಯ ಕಾಲ್ ಬಂತು ಅಂತ ಎದ್ದು ಹೋದರೆ ಬರುವುದು ಅರ್ಧ ಗಂಟೆ ಯಾಗಿರುತ್ತದೆ!! ಅಷ್ಟರಲ್ಲಿ ಚಿತ್ರ ಬಿಡಿಸುವ ಉತ್ಸಾಹ ವೆಲ್ಲ ಭರ್ರನೆ ಇಳಿದು ಬಿಟ್ಟಿರುತ್ತದೆ.! ಮೂಡ್ ಬಂದಾಗ ಬಿಡಿಸೋಣ ಅಂತ ಅಲ್ಲೇ ಬದಿಗೆ  ಒತ್ತಿಟ್ಟರಂತೂ ಅದರ ಕತೆ ಮುಗಿದ ಹಾಗೆ!! ಎರಡು ದಿನವಾದರೂ ಅದಕ್ಕೆ ಆ ಜಾಗದಿಂದ ಮುಕ್ತಿ ಸಿಕ್ಕಿರುವುದಿಲ್ಲ!!

ಹೊರಗಡೆ ನೋಡಿದರೆ ಧೋ ಎಂದು ಮಳೆ ಒಂದೇ ಸಮನೆ ಸುರಿಯುತ್ತಿದೆ .. ಸುಮ್ಮನೆ ಸಿರಸಿ ಪೇಟೆ ತಿರುಗಾಡೋಣ ಎಂದರೆ  ಈ ಮಳೆ ಅಡ್ಡಿ ಪಡಿಸುತ್ತಿದೆ.. ಆದರೂ ಅ ಮಳೆಗೂ ನನಗೂ ಏನೂ ಒಂದು ಹೇಳಲಾಗದ attachment ..! ನಾನು ಛತ್ರಿ ಇಲ್ಲದೆ ಎಲ್ಲಾದ್ರೂ ಹೊರಗಡೆ ಹೋದೆ ಎಂದರೆ ಅಂದು ಮುದ್ದಾಂ ಮಳೆ ಬರಲೇ ಬೇಕು..!
ಹಾಸ್ಟೆಲ್ ನಲ್ಲಿ ಕೂಡ ಹೀಗೇ ಆಗ್ತಾ ಇತ್ತು!! ಇವತ್ತು ಚೆನ್ನಾಗಿ ಬಿಸಿಲಿದೆ ಎಂದು ಬಟ್ಟೆ ಎಲ್ಲ ಒಗೆದು, ಮೇಲೆ ಒಣಗಿಸಿ ಬಂದು,  ರೂಂ ನೊಳಗೆ ಹೊಕ್ಕುವ ತನಕವೂ ಪುರುಸೊತ್ತು ಇಲ್ಲ ಆ ಮಳೆರಾಯನಿಗೆ!! ಮತ್ತೆ ಓಡಿ ಹೋಗಿ ಒಳಗೆ ತಂದು ಒಣಗಿಸಬೇಕಿತ್ತು!! 3-4 ಸಲ ಹೀಗೇ ಆದಾಗ ನನ್ನ ಗೆಳತಿಯರೆಲ್ಲ ತಾವು ಬಟ್ಟೆ ಒಗೆಯುವ ದಿನ ಮಾತ್ರ ನೀನು ಒಗೆಯಬೇಡ ಎನ್ನಬೇಕೇ ?!
ಆದರೂ ಏನೇ ಹೇಳಿ ನಾನು ಮಲೆನಾಡ ಹುಡುಗಿ.. ಮಳೆರಾಯನ ಪಕ್ಷ ಬಿಟ್ಟು ಕೊಡಲಾದೀತೆ??

ಚಿಕ್ಕಂದಿನಲ್ಲಾದರೆ ನಮಗೆ ಬೇಸಿಗೆ ಯಲ್ಲಿ ರಜಾ ಇರುತ್ತಿತ್ತು!! ಪರೀಕ್ಷೆ ಮುಗಿಯಿತೆಂದರೆ ಸಾಕು ನಾನು ಮತ್ತು ನನ್ನ ತಂಗಿ ನೆಂಟರಿಷ್ಟರ ಮನೆಗೆ ಓಡುತ್ತಿದ್ದೆವು .. ಅಜ್ಜಿಮನೆಯಲ್ಲಿ ಆಡಿದ ಹಲಗುಣಿ ಮಣೆ ಆಟ,, ಮನೆ ಆಟ (!!),, ಚಿನ್ನಿ ದಾಂಡು ,, ಕಣ್ಣೆ  ಮುಚ್ಚೆ ಆಟ ,, ಮುಟ್ಟಾಟ ,, ಇವೆಲ್ಲ ಇನ್ನು ಕಣ್ಣಿಗೆ ಕಟ್ಟಿದಂತೆ ಇದೆ!! ಇನ್ನು ಕೌಳಿಕಾಯಿ ,, ಸಂಪಿಗೆಹಣ್ಣು ,, ನುರುಕಲ್ ಹಣ್ಣು ,, ಪೇರಳೆ (ಸೀಬೆ),, ಚಿಕ್ಕು ಹಣ್ಣು ಅಂತ ಹುಡುಕಿಕೊಂಡು ಬೆಟ್ಟ ಬೇಣ ಸುತ್ತುವ ಮಜವೇ ಬೇರೆ!!
ಎಂತಹ ಸುಂದರ ನೆನಪುಗಳು..!!


ಮನೆಯಲ್ಲಿ ಎಷ್ಟು ದಿನ ಅಂತ ಖಾಲಿ ಕುಳಿತುಕೊಳ್ಳಲಿ?? ಕೆಲವು ದಿನಗಳ ಹಿಂದೆ ಪುಸ್ತಕ ಮೇಳಕ್ಕೆ ಹೋಗಿ 5 ಪುಸ್ತಕ ಗಳನ್ನು  ಕೊಂಡು ತಂದಿದ್ದೆ.. ಒಂದೇ ವಾರದಲ್ಲಿ ಐದೂ ಪುಸ್ತಕಗಳನ್ನೂ ಓದಿ ಮುಗಿಸಿದ್ದೇನೆ..  ಸರಿ ಈಗ  ಮತ್ತೆ ನಾನು ನಿರುದ್ಯೋಗಿ!!

ಅಮ್ಮನಾದರೋ ಅಡಿಗೆ ಮಾಡುವುದನ್ನು ಕಲಿತುಕೋ,, ಹೊಲಿಗೆ ಕಲಿ.. ಅಂತ ಹೇಳ್ತಾ ಇರ್ತಿದ್ಲು !! ಒಂದೆರಡು ದಿನ ಅದನ್ನೂ ಮಾಡಿ ಯಾಯಿತು.. ಸಾಕು.. ತುಂಬಾ ಕಲಿತು ಬಿಟ್ಟೆ(!!) ಎಂದು ಅಮ್ಮನೇ ಅಡಿಗೆ ಮನೆ ಯಿಂದ ಹೊರ ಹಾಕಿದಳು!! ಅದೆಷ್ಟು ಚೆನ್ನಾಗಿ ಮಾಡಿರಬೇಕು ಲೆಕ್ಕ ಹಾಕಿ!!

ಅಂತು ಇಂತೂ ರಜೆ ಮುಗಿಯುತ್ತ ಬಂದಿದೆ.. ಮತ್ತೊಮ್ಮೆ ದಪ್ಪ ದಪ್ಪ ವೈದ್ಯಕೀಯ ಪುಸ್ತಕಗಳ ನಡುವೆ ಮುಳುಗಿ ಹೋಗುವ ಮುನ್ನ ಹಸಿರಿನ ಸಿರಿಯಾದ ಮಲೆನಾಡಿನಲ್ಲಿ ಕಳೆದ ಈ ಮಳೆಗಾಲ ನಿಜವಾಗಲೂ ನನ್ನ ನೆನಪಿನ ಪುಟಗಳಿಂದ ಅಳಿಸಿ ಹೋಗಲಾರದು!!!

ಶುಕ್ರವಾರ, ಜುಲೈ 27, 2012

ನಿರ್ಧಾರ

ಕನಸೆಂಬ ಮಾಯಾ ಕುದುರೆಯನ್ನೇರಿ ಹೊರಟ ನನಗೆ ಕುದುರೆಯ ಮೂಗುದಾರ ಕೈಗೆ ಸಿಗದೇಎಲ್ಲಿ ಹೋಗಬೇಕೆಂದು ತಿಳಿಯದಾಗಿದೆ...ಹುಚ್ಚು ಕುದುರೆ ಕರೆದುಕೊಂಡು ಹೋದಲ್ಲಿ ಹೋಗುತ್ತಿರುವ ನನಗೆ ವಾಸ್ತವದ ಅರಿವಾಗುವ ಹೊತ್ತಿಗೆ ಆ ಕುದುರೆ ನನ್ನನ್ನು ಕೆಳಕ್ಕೆ ಬೀಳಿಸಿ ಓಡಿ ಹೋಗಿದೆ.
ಮೈ ಮನದ ತುಂಬಾ ಆದ ಪೆಟ್ಟುಗಳು ದೇಹವನ್ನು ಹಿಂಡಿ  ಹಿಪ್ಪೆ ಮಾಡಿವೆ.... ಕಲ್ಲು ಮುಳ್ಳುಗಳ ಕಠಿಣ ವಾಸ್ತವಿಕ ಹಾದಿಯಲ್ಲಿ ನಡೆಯುವಾಗ,  ಕುದುರೆಸವಾರಿಯೇ ಎಷ್ಟೋ ಹಿತವಾಗಿತ್ತು ಎಂದು ಅನ್ನಿಸುತ್ತಿದೆ.. ಈ ವಾಸ್ತವದ ಬದುಕಿನಲ್ಲಿ ಕನಸು ಎಂಬುದು ಮಾತ್ರ ಸುಂದರ.. ಉಳಿದಿರುವುದೆಲ್ಲ ಕಷ್ಟ ಕೋಟಲೆ, ಅವಮಾನ, ನಿಂದನೆ ಗಳ ಸರಮಾಲೆ ಎಂದು ನನ್ನ ಮನಸ್ಸು ಬದುಕಿಗೆ ವ್ಯಾಖ್ಯಾನ ನೀಡಿ ಬಿಟ್ಟಿದೆ...


ಸುತ್ತಲೂ ನೋಡಿದೆ ...
ನನ್ನಂತೆಯೇ ಸಹಸ್ರ ಸಹಸ್ರ ಜನರು ..
ವ್ರದ್ಧರು ..ಮಕ್ಕಳು ಮಹಿಳೆಯರು..
ಇವರೆಲ್ಲ ಯಾವುದರಿಂದ ಮಾಡಲ್ಪಟ್ಟಿದ್ದಾರೆ?
 ಅದೆಷ್ಟು ಅದಮ್ಯ ಉತ್ಸಾಹ ಚೇತನ ಬತ್ತದ ಆಸಕ್ತಿ..
ಜೀವನದ ಬಗ್ಗೆ ನನಗಿಂತ ಹೆಚ್ಚು ಬಲ್ಲವರೂ ಜೀವನವನ್ನು ಇಷ್ಟೊಂದು ಪ್ರೀತಿಸುತ್ತಿರುವರಲ್ಲ?
ನಾನು ಮಾತ್ರ ಯಾಕೆ ಹೀಗೆ?
ಒಂದು ಸೋಲಿಗೆ ನನ್ನನ್ನು ಇಷ್ಟೊಂದು ಅಧೀರಳನ್ನಾಗಿ ಮಾಡುವ ಶಕ್ತಿ ಇದೆಯೇ?

 "ಸೋಲೇ ಗೆಲುವಿನ ಸೋಪಾನ"   "ಸೋಲುಗಳು ಜೀವನದ ಒಳ್ಳೆಯ ಪಾಠಗಳು "
ಎಂದೆಲ್ಲಾ ಕನ್ನಡ ಶಾಲೆಗಳಲ್ಲಿ ಭಾಷಣ ಮಾಡಿದ್ದು ಹಸಿಹಸಿಯಾಗಿಯೇ ಇದೆ. 
ಆದರೆ ನಾನು ಸೋಲನ್ನು ಸ್ವೀಕರಿಸುವ ರೀತಿ ಮಾತ್ರ ಏಕೆ ಬದಲಾಗಿದೆ?
ಕನಸಿನಲ್ಲಿ ಕಂಡಂತೆ ಜೀವನ ವನ್ನು ರೂಪಿಸಲು ಸಾಧ್ಯವಾಗಲಿಲ್ಲ  ಎಂದು ಜೀವನವನ್ನೇ ದೂಶಿಸುವುದು ಸರಿಯೇ?

ಸರಿಯಾಗಿ ವಿಚಾರ ಮಾಡಿದಾಗ ನಾನೇ ತಪ್ಪಿತಸ್ತಳು ಎಂದು ಅನ್ನಿಸತೊಡಗಿದೆ..
ನನ್ನ ತಪ್ಪಿಗೊಸ್ಕರ ನನ್ನ ಜೀವನವನ್ನೇಕೆ ಬಳಿ ಕೊಡಬೇಕು?

ನನ್ನ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತೇನೆ....
ಈ ಸೋಲಿನ ಕಹಿ ಮೀರಿಸುವ ಗೆಲುವಿನ ರುಚಿಯನ್ನು ಪಡೆಯುತ್ತೇನೆ..
ಆಗ ಮಾತ್ರ ನನ್ನ ತಪ್ಪಿಗೆ ಕ್ಷಮೆ
ಕನಸಿನ ರಾಜ್ಯದಿಂದ ಹೊರಬಂದು ಬದುಕನ್ನು ವಿಸ್ತಾರ ದೃಷ್ಟಿಕೂನದಿಂದ ನೋಡಬಯಸುತ್ತೇನೆ..
ಸೋಲಿನಿಂದ ಕಂಗೆಟ್ಟು ಬದುಕಿಗೆ ಕೊಳ್ಳಿ ಇದುವ ಹೀನ ಕಾರ್ಯ ವನ್ನು ನಾನೆಂದೂ ಮಾಡುವುದಿಲ್ಲ..

ಭಾನುವಾರ, ಡಿಸೆಂಬರ್ 4, 2011

ಮಾತಿಗೆ ಬಣ್ಣ ತುಂಬುವ ಆಸೆ

ಅಪರೂಪಕ್ಕೊಮ್ಮೆ ಮನೆಗೆ ಬಂದಾಗ ಮಾಡಲಿಕ್ಕೆ ಸಿಕ್ಕಾಪಟ್ಟೆ ಕೆಲಸಗಳಿರುತ್ತವೆ. ಮನೆಯವರೊಂದಿಗೆ ಕಾಲೇಜಿನ ಸುದ್ದಿ ಹೇಳೋದು ಅದ್ರಲ್ಲಿ ಮುಖ್ಯ ವಾದದ್ದು .. ಕಾಲೇಜಿನ ಕ್ಯಾಂಪಸ್ಸು,, ಹಾಸ್ಟೆಲ್ ನ ತಿಂಡಿ,, ರೂಂ ಮೇಟ್ಸ್ ಗಳ ರಾಮಾಯಣ ..ಹೀಗೆ ಹಲುಬೋದಿಕ್ಕೆ ಬೇಜಾನ್ ಸಾಮಗ್ರಿಗಳು ಸಿಗುತ್ತವೆ.. 
ಆದರೆ ನಾನಂತೂ ಈ ಸಲ ಬರುವಾಗ ನಿರ್ಧಾರ ಮಾಡಿಕೊಂಡೇ ಬಂದಿದ್ದೆ.. ಏನೇ ಆಗಲಿ ನಾನು ಒಂದು ಚಿತ್ರ ಬಿಡಿಸಬೀಕು ಅಂತ....
ಹವ್ದು.. ಅದೆಷ್ಟು ದಿನ ಆಗೋಯ್ತು ನಾನು ಚಿತ್ರ ಬಿಡಿಸಿ??  ಪ್ರೌಢ ಶಾಲೆಯಲ್ಲಿರುವಾಗ ತಿಂಗಳಿಗೆ ಒಮ್ಮೆ ಯಾವುದಾದರೂ ಒಂದು ಹೂವೋ, ಮನೆಯೋ .. ಮರವೋ ಏನನ್ನಾದರೂ ಬಿಡಿಸುತ್ತಿದ್ದೆ.. ಈಗಲೂ ಬಿಡಿಸುತ್ತಿದ್ದೇನೆ   ಬಿಡಿ.. ಅನಾಟಮಿ ಯ ಅಸ್ಥಿಗಳನ್ನು .  ಸ್ನಾಯುಗಳನ್ನು  ,, ನರವ್ಯೂಹಗಳನ್ನು !!!
ಸರಿ ,, ಮನೆಗೆ ಬಂದೆ..
ಅಂದು ಕೊಂಡ ಹಾಗೆ ಆಯಿತು.. ಬೆಳಿಗ್ಗೆ ಇಡೀ ದಿನ ಹರಟೆ ಹೊಡೆಯುವುದರಲ್ಲಿ .. ಅಮ್ಮನ ಕೈ ರುಚಿಯ ಊಟ ಮಾಡುವುದರಲ್ಲಿಯೇ ಕಾಲ ಹರಣ ಮಾಡಿದೆ.. ರಾತ್ರಿ ಊಟ ಆದ ಮೇಲೆ ನನ್ನ ನಿರ್ಧಾರ ದ ನೆನೆಪಾಯಿತು..( ಪುಣ್ಯ ಆಗಲಾದರೂ ಆಯಿತಲ್ಲ.. ವಾಪಸ್ ಹೋದ ಮೇಲೆ ಆಗಿದ್ದಿದ್ದರೆ??) ಮನೆಯಲ್ಲಿ ಎಲ್ಲರು ಮಲಗುವ ಸಮಯ ದಲ್ಲಿ ಹಾಳೆ,, ಬಣ್ಣ,, ಬ್ರುಶುಗಳಿಗಾಗಿ ನನ್ನ ಹುಡುಕಾಟ ಆರಂಭ ವಾಯಿತು..
ಹ್ಞೂ .. ನಾನು ಬಿಡಿಸಲು ಶುರು ಹಚ್ಚಿದೆ..ಯಾಕೋ ನನ್ನ ಕೈಗಳು ನನ್ನ ಮೇಲೆ ಮುನಿಸಿಕೊಂಡವರ ಹಾಗೆ ವಿಚಿತ್ರವಾಗಿ ಆಡುತ್ತಿದ್ದವು..   palm ನಲ್ಲಿರೋ   fine muscles  ಕೆಲಸವಿಲ್ಲದೆ ಅವುಗಳೆಲ್ಲ ಜಡ್ಡುಗಟ್ತಿವೆ!! ಹೇಗಾಗಿವೆ  ನನ್ನ ಚಿತ್ರಗಳು??
ನಾನೇನು ದೊಡ್ಡ ಕಲಾವಿದೆಯೇನು ಅಲ್ಲ... ಆದ್ರೆ ಕಲೆಯ ಆರಾಧಕಿ...  ಎಂಬಿಬಿಎಸ್ ನ      ದಪ್ಪ ದಪ್ಪ ಪುಸ್ತಕಗಳ ನಡುವಿ ನಲ್ಲಿ ಸಿಲುಕಿ ಕಲೆಯನ್ನೆಲ್ಲಿ ಮರೆತು  ಬಿಡುತ್ತೇನೋ ಎಂಬ ಭಯ...


                                                        
ಶನಿವಾರ, ಸೆಪ್ಟೆಂಬರ್ 3, 2011

ಗುರುವಿನ ಗುಲಾಮನಾಗುವ ತನಕ

ಮೊನ್ನೆ ಮನೆಯಲ್ಲಿ ಚವತಿ ಹಬ್ಬದ ತಯಾರಿ ಮಾಡುತ್ತಿರುವಾಗ ಎದುರು ಮನೆಯ ಹುಡುಗನೊಬ್ಬ ದೊಡ್ಡ ಬ್ಯಾಗ್ನಲ್ಲಿ ಗಿಫ್ಟು , ಬಣ್ಣ ಬಣ್ಣದ ಪರಪರೆಗಳನ್ನು ಹಿಡಿದುಕೊಂಡು ಹೋಗ್ತಾ ಇದ್ದ .. 'ಏನೋ ಮಾರಾಯಾ,, ಜೋರು ತಯಾರಿ ಹಬ್ಬಕ್ಕೆ.. ನಿಮ್ಮನೆಯಲ್ಲೂ ಗಣಪತಿ ಇಡ್ತಾರ?' ಅಂತ ಕೇಳಿದೆ.. ಅದಕ್ಕವನು,, 'ಇಲ್ಲಾ ಅಕ್ಕಾ teacher s day preparation '  ಅಂತ ಹೇಳಿ ಬಂದಷ್ಟೇ ವೇಗವಾಗಿ ಹೋದ..

ಆಗ ನೆನಪಾಯಿತು ,,
ಹೌದಲ್ಲ.. ಬಂದೇ ಬಿಡ್ತು ಸೆಪ್ಟೆಂಬರ್ ೫ .. ಶಿಕ್ಷಕರ ದಿನಾಚರಣೆ ..
 ನಾವು ಕೂಡ ಪ್ರಾಥಮಿಕ ಶಾಲೆಯಲ್ಲಿದ್ದಾಗ ಅದೆಷ್ಟು ಸಂಬ್ರಮದಿಂದ ಇಂಥಹ ದಿನಗಳಿಗೆ ಎದುರು ನೋಡುತ್ತಿದ್ದೆವು ..  ಹಾಡು ನೃತ್ಯ ಅಂತ ಎರಡು ವಾರದಿಂದ ತಯಾರಿ ನಡೆಯುತ್ತಿತ್ತು .. ಕ್ಲಾಸ್ಸಿನವರೆಲ್ಲ ತಮ್ಮ ತಮ್ಮ ಕ್ಲಾಸ್ ಟೀಚೆರ್ಸ್ ಗಳಿಗೆ ಏನಾದರು ಉಡುಗೊರೆ ಕೊಡುತ್ತಿದ್ದರು... ಶಿಕ್ಷಕರ ಎದುರು ಹಾಡು ಡ್ಯಾನ್ಸು ಮಾಡಿ ಅವರಿಗೆ ಗಿಫ್ಟು ಕೊಟ್ಟರೆ ಅವರ ಮೆಚ್ಚುಗೆ ಗಳಿಸಬಹುದು ಎಂಬ ಸ್ವಾರ್ಥವೂ ಇರಬಹುದು ! ಆದರೆ ಇದು   ಹಲವಾರು ಸಂಧರ್ಭಗಳಲ್ಲಿ ನಿಜ ವಾಗುತ್ತಿದ್ದುದು ವಿಪರ್ಯಾಸ !
ಆಗ ನಮಗೆ ನಿಜವಾಗಲೂ ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ಅರಿವಿರಲಿಲ್ಲ .. ಸುಮ್ಮನೆ ಸಾಮಾನ್ಯ  ಜ್ಞಾನಕ್ಕಾಗಿ ಸರ್ವಪಲ್ಲಿ ರಾಧಾಕೃಷ್ಣನ್ ರವರು ತಮ್ಮ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಮಾಡಿದರು ಎಂದು ತಿಳಿದಿಟ್ಟುಕೊಂಡಿದ್ದೆವು .. ಯಾರಾದರೂ ಭಾಷಣ ಮಾಡಲು ಬಂದಾಗ ಯಾವಾಗ ಮುಗಿಸುತ್ತಾರೋ, ಯಾವಾಗ ಡ್ಯಾನ್ಸು ಶುರುವಾಗುತ್ತದೋ ಎಂದು ಎದುರು ನೋಡುತ್ತಿದ್ದೆವು !

ಈಗ ಅನ್ನಿಸುತ್ತೆ ಅದೆಷ್ಟು ದಾಂಬಿಕವಾಗಿ  ಆಚರಿಸುತ್ತಾ ಇದ್ದೇವೆ ಅಂತ ಹವ್ದಲ್ಲವೇ?
 ಈ ರೀತಿಯಲ್ಲಿ ಕೇಕು ಕತ್ತರಿಸಿ , ಯಾವುದೋ ಹಿಂದಿ ಹಾಡುಗಳಿಗೆ ನೃತ್ಯ ಮಾಡಿದರೆ ಶಿಕ್ಷಕರ ದಿನವನ್ನು ಆಚರಿಸಿದ ಸಾರ್ಥಕತೆ ಲಭಿಸುತ್ತದೆಯೇ?
ಹಾಗಾದರೆ ವಿಧ್ಯಾರ್ಥಿಯಾದವನು ಶಿಕ್ಷಕರಿಗೆ ಏನು ನೀಡಬೇಕು? ನಿಜವಾದ ಶಿಕ್ಷಕರು ನಮ್ಮಿಂದ ಒಳ್ಳೆಯ ನಡವಳಿಕೆಯನ್ನು ,, ಉತ್ತಮ ಪ್ರಗತಿಯನ್ನು ಬಯಸುತ್ತಾರೆ.. ಒಂದು ಹಿಡಿ ಪ್ರೀತಿ ,, ಗೌರವ ನೀಡಿದರೆ ಅವರನ್ನು ಸನ್ಮಾನಿಸಿದಂತೆ ... 

 ದಾರಿಯಲ್ಲಿ ಕಲಿಸಿದ ಗುರುಗಳು ಕಂಡಾಗ ನಮಸ್ತೆ ಎಂದು ನಗು ಬೀರಿ ಆರಾಮಾ ಟೀಚರ್ ಎಂದು ಮಾತನಾಡಿಸಿದಾಗ  ಅವರಿಗೆ ಸಿಗುವ ಖುಷಿಯನ್ನು ಬಣ್ಣಿಸಲಾಗದು.. ಇಂತಹ ಒಂದು ಕ್ಷಣಕ್ಕಾಗಿಯೇ ಅವರು ನಮ್ಮೆಲ್ಲ ಕೀಟಲೆಗಳನ್ನು ಸಹಿಸುತ್ತ ,, ನಮ್ಮ ತಪ್ಪುಗಳನ್ನು ತಿದ್ದುತ್ತ ,, ನಮ್ಮ ಕನಸಿಗೆ ರೂಪು ರೇಷೆ ನೀಡುತ್ತಿದ್ದುದು ..

ನಾನಂತೂ ಶಿಕ್ಷಕರ ವಿಷಯದಲ್ಲಿ ತುಂಬಾ ಆದೃಷ್ಟವಂತೆ...
ಚಿಕ್ಕಂದಿನಲ್ಲಿ ಬೆತ್ತದ ರುಚಿ ಕಾಣಿಸಿ ಮಗ್ಗಿ ಕಲಿಸಿದ ಬಾಲವಾಡಿಯ ಆಕ್ಕೊರಿಂದ ಹಿಡಿದು ಪಿಯುಸಿ ಯತನಕ ಕಲಿಸಿದ ಎಲ್ಲಾ ಮಿಸ್ಸು ಟೀಚೆರು ಮೇಡಮ್ಮು ಸರ್ ಎಲ್ಲರು ನನ್ನ ಬಾಳಿನ ಶಿಲ್ಪಿಗಳು ...
ಈಗ ಉನ್ನತ ಶಿಕ್ಷಣಕ್ಕಾಗಿ ಬೇರೆ ಊರಿಗೆ ಹೊರಟು ನಿಂತಾಗ ಯಾಕೋ ಇವರೆಲ್ಲ ನೆನಪಾದರು ... ಶಿಕ್ಷಕರ ದಿನ ಹೊಸ್ತಿಲಲ್ಲಿ ಇರುವಾಗ ಇವರಿಗೊಂದು ಧನ್ಯವಾದ ಅರ್ಪಿಸಬೇಕು ಅಂತ ಅನ್ನಿಸಿತು ,,


thank u teachers

ಶುಕ್ರವಾರ, ಆಗಸ್ಟ್ 5, 2011

ಮಲೆನಾಡ ಮಳೆ


ಮಲೆನಾಡ ಮಳೆಯಲ್ಲಿ ಅಡಿ ಮುಡಿಯು ನೆನೆದಾಗ
ಶೀತಲದ ಸುಳಿಗಾಳಿ ಸುಯ್ಯೆಂದು ಮೊರೆದಾಗ
ನೆತ್ತರು ಹೆಪ್ಪಾಗಿ ಚಳಿಯಾಗಿ ಕೊರೆದಾಗ
ಇದುವಲ್ಲವೇ ಸ್ವರ್ಗ ಎಂದೆನಿಸಿತಾಗ

ನೆಲ ಮುಗಿಲು ಒಂದಾದಂತೆ ಸುರಿಯುವ ಆ ಸೋನೆಯ ಪರಿ
ತುಂಬು ಜವ್ವನೆಯಂತೆ ಮೈದುಂಬಿ ಹರಿಯುವ ಝರಿ
ಬೆಳ್ಳಿಯಾ ತೆರೆಯಂತೆ ಮಂಜು ಕವಿದಿರೆ
ಮಿನುಗುವ ಚುಕ್ಕಿ ಮಸುಕಾಗಿ ಮರೆಯಾಗಿರೆ ..

ವಟಗುಟ್ಟುತ್ತಿವೆ  ಕಪ್ಪೆಯ ಬಳಗವು
ಕುಟುರುತ್ತಿವೆ ಮರ ಜಿರಳೆಗಳು
ತರುಲತೆಗಳ ಚಿಗುರಿನ ಸೌಂದರ್ಯ ದ ಮೆರಗು
ಸೊಂಪಾಗಿ ಹ ಮರಗಳಲ್ಲಿ ಹಕ್ಕಿಗಳ ಗುನುಗು

ಧನ್ಯವೋ ಧನ್ಯ ಈ ಮಲೆನಾಡ ಜನ
ಪ್ರತಿಮಳೆಯು ನೀಡುವುದಿಲ್ಲಿ ಹೊಸ ಚೈತನ್ಯ
ನೋಡಲ್ಲಿ ಹೊರಟಿಹನು ನಮ್ಮ ಅನ್ನದಾತನು
ಭರದಿಂದ ಹೊಲವನ್ನು ಹದಗೊಳಿಸಿ ಬಿತ್ತಲು ಬೀಜವನು

ಶುಕ್ರವಾರ, ಜೂನ್ 10, 2011

ಬಾನಿನಿಂದ ಬುವಿಗೆ

ಹಕ್ಕಿಯಾಗುವ ಆಸೆ ಹೊತ್ತು
ಬ್ರಹ್ಮನ ಮುಂದೆ ನಿಂತೆ..
ಅವ ನನ್ನ
ಪುಕ್ಕ ಕಿತ್ತು,
ರೆಕ್ಕೆ ಕತ್ತರಿಸಿ,,,
ಗಗನದಿ ಹಾರಿ ನಲಿದಾಡುವ
ನನ್ನ ಕನಸನು ಸುಟ್ಟು,,,,
ಮಣ್ಣಿಗೆ ಮುತ್ತಿಕ್ಕು
ಎಂಬ ಶಾಪವನಿತ್ತ ........