ಶನಿವಾರ, ಆಗಸ್ಟ್ 18, 2012

ರಜಾ.. ಮಜಾ - ಸಜಾ !!

ಮನೆಗೆ ಬಂದು ಒಂದು ತಿಂಗಳಾಗ್ತಾ ಇದೆ.. ಹಾಸ್ಟೆಲ್ ನಲ್ಲಿ ಇದ್ದಾಗ ಮನೆ - ಮನೆ ಅಂತ ಬಡಬಡಿಸಿದ್ದೊಂದೇ ಬಂತು!! ಮನೆಗೆ ಬಂದು  ಮಾಡಿದ ಘನಂದಾರಿ ಕೆಲಸಗಳಾದರೂ ಏನು ಎಂದು ಯೋಚಿಸಿದಾಗ ನಗು.. ಕೋಪ ..  ಎಲ್ಲವು ಬರುತ್ತದೆ..
ದಿನಕ್ಕೆ ಹತ್ತು ತಾಸು ನಿದ್ದೆ.. ಹರಟೆ ,, ಫೇಸ್ ಬುಕ್,, ಬ್ಲಾಗು.. ಮೊಬೈಲು,,, ಮಧ್ಯದಲ್ಲಿ ಅಮ್ಮ ಹೇಳಿದ ಚಿಕ್ಕ ಪುಟ್ಟ ಕೆಲಸ ಮಾಡುವುದು.. ಹೀಗೆ ಸಖಾಸುಮ್ಮನೆ ಕಾಲಹರಣ ಮಾಡ್ತಾ ಇದ್ದೇನೆ..

ಪ್ರತಿ ಸಲ ರಜೆ ಬಂದಾಗಲೂ ನಾನು ಇದನ್ನು ಮಾಡಬೇಕು  ಅದನ್ನು ಮಾಡಬೇಕು ಅಂತ ಸಿಕ್ಕಾಪಟ್ಟೆ ಪ್ಲಾನ್ ಮಾಡಿಕೊಳ್ಳುವುದಂತು ಹೌದು ... ಅವುಗಳಲ್ಲಿ ಒಂದನ್ನಾದರೂ ಸರಿಯಾಗಿ ಮುಗಿಸಿದ್ದರೆ ಕೇಳಿ!!! ಎಲ್ಲವೂ ಅರ್ಧಕ್ಕೆ ಅಂತ್ಯ ಕಂಡವುಗಳೇ !! ಇದರಿಂದಾಗಿಯೇ ಅಮ್ಮ ನನ್ನ ಮೇಲೆ ಕೂಗಾಡುವುದು ತಪ್ಪುವುದಿಲ್ಲ!!
ಚಿತ್ರ ಬಿಡಿಸೋಣ ಎಂದು ಹಾಳೆ,, ಪೆನ್ಸಿಲ್ಲು .. ಬಣ್ಣ ಬ್ರಶ್ಹು ಇವೆಲ್ಲವನ್ನು ಇಟ್ಟುಕೊಂಡು ಶುರುಮಾಡುತ್ತೇನೆ.. ನಿಜ.. ಮಧ್ಯದಲ್ಲಿ ಯಾವುದಾದರೂ ಗೆಳತಿಯ ಕಾಲ್ ಬಂತು ಅಂತ ಎದ್ದು ಹೋದರೆ ಬರುವುದು ಅರ್ಧ ಗಂಟೆ ಯಾಗಿರುತ್ತದೆ!! ಅಷ್ಟರಲ್ಲಿ ಚಿತ್ರ ಬಿಡಿಸುವ ಉತ್ಸಾಹ ವೆಲ್ಲ ಭರ್ರನೆ ಇಳಿದು ಬಿಟ್ಟಿರುತ್ತದೆ.! ಮೂಡ್ ಬಂದಾಗ ಬಿಡಿಸೋಣ ಅಂತ ಅಲ್ಲೇ ಬದಿಗೆ  ಒತ್ತಿಟ್ಟರಂತೂ ಅದರ ಕತೆ ಮುಗಿದ ಹಾಗೆ!! ಎರಡು ದಿನವಾದರೂ ಅದಕ್ಕೆ ಆ ಜಾಗದಿಂದ ಮುಕ್ತಿ ಸಿಕ್ಕಿರುವುದಿಲ್ಲ!!

ಹೊರಗಡೆ ನೋಡಿದರೆ ಧೋ ಎಂದು ಮಳೆ ಒಂದೇ ಸಮನೆ ಸುರಿಯುತ್ತಿದೆ .. ಸುಮ್ಮನೆ ಸಿರಸಿ ಪೇಟೆ ತಿರುಗಾಡೋಣ ಎಂದರೆ  ಈ ಮಳೆ ಅಡ್ಡಿ ಪಡಿಸುತ್ತಿದೆ.. ಆದರೂ ಅ ಮಳೆಗೂ ನನಗೂ ಏನೂ ಒಂದು ಹೇಳಲಾಗದ attachment ..! ನಾನು ಛತ್ರಿ ಇಲ್ಲದೆ ಎಲ್ಲಾದ್ರೂ ಹೊರಗಡೆ ಹೋದೆ ಎಂದರೆ ಅಂದು ಮುದ್ದಾಂ ಮಳೆ ಬರಲೇ ಬೇಕು..!
ಹಾಸ್ಟೆಲ್ ನಲ್ಲಿ ಕೂಡ ಹೀಗೇ ಆಗ್ತಾ ಇತ್ತು!! ಇವತ್ತು ಚೆನ್ನಾಗಿ ಬಿಸಿಲಿದೆ ಎಂದು ಬಟ್ಟೆ ಎಲ್ಲ ಒಗೆದು, ಮೇಲೆ ಒಣಗಿಸಿ ಬಂದು,  ರೂಂ ನೊಳಗೆ ಹೊಕ್ಕುವ ತನಕವೂ ಪುರುಸೊತ್ತು ಇಲ್ಲ ಆ ಮಳೆರಾಯನಿಗೆ!! ಮತ್ತೆ ಓಡಿ ಹೋಗಿ ಒಳಗೆ ತಂದು ಒಣಗಿಸಬೇಕಿತ್ತು!! 3-4 ಸಲ ಹೀಗೇ ಆದಾಗ ನನ್ನ ಗೆಳತಿಯರೆಲ್ಲ ತಾವು ಬಟ್ಟೆ ಒಗೆಯುವ ದಿನ ಮಾತ್ರ ನೀನು ಒಗೆಯಬೇಡ ಎನ್ನಬೇಕೇ ?!
ಆದರೂ ಏನೇ ಹೇಳಿ ನಾನು ಮಲೆನಾಡ ಹುಡುಗಿ.. ಮಳೆರಾಯನ ಪಕ್ಷ ಬಿಟ್ಟು ಕೊಡಲಾದೀತೆ??

ಚಿಕ್ಕಂದಿನಲ್ಲಾದರೆ ನಮಗೆ ಬೇಸಿಗೆ ಯಲ್ಲಿ ರಜಾ ಇರುತ್ತಿತ್ತು!! ಪರೀಕ್ಷೆ ಮುಗಿಯಿತೆಂದರೆ ಸಾಕು ನಾನು ಮತ್ತು ನನ್ನ ತಂಗಿ ನೆಂಟರಿಷ್ಟರ ಮನೆಗೆ ಓಡುತ್ತಿದ್ದೆವು .. ಅಜ್ಜಿಮನೆಯಲ್ಲಿ ಆಡಿದ ಹಲಗುಣಿ ಮಣೆ ಆಟ,, ಮನೆ ಆಟ (!!),, ಚಿನ್ನಿ ದಾಂಡು ,, ಕಣ್ಣೆ  ಮುಚ್ಚೆ ಆಟ ,, ಮುಟ್ಟಾಟ ,, ಇವೆಲ್ಲ ಇನ್ನು ಕಣ್ಣಿಗೆ ಕಟ್ಟಿದಂತೆ ಇದೆ!! ಇನ್ನು ಕೌಳಿಕಾಯಿ ,, ಸಂಪಿಗೆಹಣ್ಣು ,, ನುರುಕಲ್ ಹಣ್ಣು ,, ಪೇರಳೆ (ಸೀಬೆ),, ಚಿಕ್ಕು ಹಣ್ಣು ಅಂತ ಹುಡುಕಿಕೊಂಡು ಬೆಟ್ಟ ಬೇಣ ಸುತ್ತುವ ಮಜವೇ ಬೇರೆ!!
ಎಂತಹ ಸುಂದರ ನೆನಪುಗಳು..!!


ಮನೆಯಲ್ಲಿ ಎಷ್ಟು ದಿನ ಅಂತ ಖಾಲಿ ಕುಳಿತುಕೊಳ್ಳಲಿ?? ಕೆಲವು ದಿನಗಳ ಹಿಂದೆ ಪುಸ್ತಕ ಮೇಳಕ್ಕೆ ಹೋಗಿ 5 ಪುಸ್ತಕ ಗಳನ್ನು  ಕೊಂಡು ತಂದಿದ್ದೆ.. ಒಂದೇ ವಾರದಲ್ಲಿ ಐದೂ ಪುಸ್ತಕಗಳನ್ನೂ ಓದಿ ಮುಗಿಸಿದ್ದೇನೆ..  ಸರಿ ಈಗ  ಮತ್ತೆ ನಾನು ನಿರುದ್ಯೋಗಿ!!

ಅಮ್ಮನಾದರೋ ಅಡಿಗೆ ಮಾಡುವುದನ್ನು ಕಲಿತುಕೋ,, ಹೊಲಿಗೆ ಕಲಿ.. ಅಂತ ಹೇಳ್ತಾ ಇರ್ತಿದ್ಲು !! ಒಂದೆರಡು ದಿನ ಅದನ್ನೂ ಮಾಡಿ ಯಾಯಿತು.. ಸಾಕು.. ತುಂಬಾ ಕಲಿತು ಬಿಟ್ಟೆ(!!) ಎಂದು ಅಮ್ಮನೇ ಅಡಿಗೆ ಮನೆ ಯಿಂದ ಹೊರ ಹಾಕಿದಳು!! ಅದೆಷ್ಟು ಚೆನ್ನಾಗಿ ಮಾಡಿರಬೇಕು ಲೆಕ್ಕ ಹಾಕಿ!!

ಅಂತು ಇಂತೂ ರಜೆ ಮುಗಿಯುತ್ತ ಬಂದಿದೆ.. ಮತ್ತೊಮ್ಮೆ ದಪ್ಪ ದಪ್ಪ ವೈದ್ಯಕೀಯ ಪುಸ್ತಕಗಳ ನಡುವೆ ಮುಳುಗಿ ಹೋಗುವ ಮುನ್ನ ಹಸಿರಿನ ಸಿರಿಯಾದ ಮಲೆನಾಡಿನಲ್ಲಿ ಕಳೆದ ಈ ಮಳೆಗಾಲ ನಿಜವಾಗಲೂ ನನ್ನ ನೆನಪಿನ ಪುಟಗಳಿಂದ ಅಳಿಸಿ ಹೋಗಲಾರದು!!!