ಶುಕ್ರವಾರ, ಜುಲೈ 27, 2012

ನಿರ್ಧಾರ

ಕನಸೆಂಬ ಮಾಯಾ ಕುದುರೆಯನ್ನೇರಿ ಹೊರಟ ನನಗೆ ಕುದುರೆಯ ಮೂಗುದಾರ ಕೈಗೆ ಸಿಗದೇಎಲ್ಲಿ ಹೋಗಬೇಕೆಂದು ತಿಳಿಯದಾಗಿದೆ...ಹುಚ್ಚು ಕುದುರೆ ಕರೆದುಕೊಂಡು ಹೋದಲ್ಲಿ ಹೋಗುತ್ತಿರುವ ನನಗೆ ವಾಸ್ತವದ ಅರಿವಾಗುವ ಹೊತ್ತಿಗೆ ಆ ಕುದುರೆ ನನ್ನನ್ನು ಕೆಳಕ್ಕೆ ಬೀಳಿಸಿ ಓಡಿ ಹೋಗಿದೆ.
ಮೈ ಮನದ ತುಂಬಾ ಆದ ಪೆಟ್ಟುಗಳು ದೇಹವನ್ನು ಹಿಂಡಿ  ಹಿಪ್ಪೆ ಮಾಡಿವೆ.... ಕಲ್ಲು ಮುಳ್ಳುಗಳ ಕಠಿಣ ವಾಸ್ತವಿಕ ಹಾದಿಯಲ್ಲಿ ನಡೆಯುವಾಗ,  ಕುದುರೆಸವಾರಿಯೇ ಎಷ್ಟೋ ಹಿತವಾಗಿತ್ತು ಎಂದು ಅನ್ನಿಸುತ್ತಿದೆ.. ಈ ವಾಸ್ತವದ ಬದುಕಿನಲ್ಲಿ ಕನಸು ಎಂಬುದು ಮಾತ್ರ ಸುಂದರ.. ಉಳಿದಿರುವುದೆಲ್ಲ ಕಷ್ಟ ಕೋಟಲೆ, ಅವಮಾನ, ನಿಂದನೆ ಗಳ ಸರಮಾಲೆ ಎಂದು ನನ್ನ ಮನಸ್ಸು ಬದುಕಿಗೆ ವ್ಯಾಖ್ಯಾನ ನೀಡಿ ಬಿಟ್ಟಿದೆ...


ಸುತ್ತಲೂ ನೋಡಿದೆ ...
ನನ್ನಂತೆಯೇ ಸಹಸ್ರ ಸಹಸ್ರ ಜನರು ..
ವ್ರದ್ಧರು ..ಮಕ್ಕಳು ಮಹಿಳೆಯರು..
ಇವರೆಲ್ಲ ಯಾವುದರಿಂದ ಮಾಡಲ್ಪಟ್ಟಿದ್ದಾರೆ?
 ಅದೆಷ್ಟು ಅದಮ್ಯ ಉತ್ಸಾಹ ಚೇತನ ಬತ್ತದ ಆಸಕ್ತಿ..
ಜೀವನದ ಬಗ್ಗೆ ನನಗಿಂತ ಹೆಚ್ಚು ಬಲ್ಲವರೂ ಜೀವನವನ್ನು ಇಷ್ಟೊಂದು ಪ್ರೀತಿಸುತ್ತಿರುವರಲ್ಲ?
ನಾನು ಮಾತ್ರ ಯಾಕೆ ಹೀಗೆ?
ಒಂದು ಸೋಲಿಗೆ ನನ್ನನ್ನು ಇಷ್ಟೊಂದು ಅಧೀರಳನ್ನಾಗಿ ಮಾಡುವ ಶಕ್ತಿ ಇದೆಯೇ?

 "ಸೋಲೇ ಗೆಲುವಿನ ಸೋಪಾನ"   "ಸೋಲುಗಳು ಜೀವನದ ಒಳ್ಳೆಯ ಪಾಠಗಳು "
ಎಂದೆಲ್ಲಾ ಕನ್ನಡ ಶಾಲೆಗಳಲ್ಲಿ ಭಾಷಣ ಮಾಡಿದ್ದು ಹಸಿಹಸಿಯಾಗಿಯೇ ಇದೆ. 
ಆದರೆ ನಾನು ಸೋಲನ್ನು ಸ್ವೀಕರಿಸುವ ರೀತಿ ಮಾತ್ರ ಏಕೆ ಬದಲಾಗಿದೆ?
ಕನಸಿನಲ್ಲಿ ಕಂಡಂತೆ ಜೀವನ ವನ್ನು ರೂಪಿಸಲು ಸಾಧ್ಯವಾಗಲಿಲ್ಲ  ಎಂದು ಜೀವನವನ್ನೇ ದೂಶಿಸುವುದು ಸರಿಯೇ?

ಸರಿಯಾಗಿ ವಿಚಾರ ಮಾಡಿದಾಗ ನಾನೇ ತಪ್ಪಿತಸ್ತಳು ಎಂದು ಅನ್ನಿಸತೊಡಗಿದೆ..
ನನ್ನ ತಪ್ಪಿಗೊಸ್ಕರ ನನ್ನ ಜೀವನವನ್ನೇಕೆ ಬಳಿ ಕೊಡಬೇಕು?

ನನ್ನ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತೇನೆ....
ಈ ಸೋಲಿನ ಕಹಿ ಮೀರಿಸುವ ಗೆಲುವಿನ ರುಚಿಯನ್ನು ಪಡೆಯುತ್ತೇನೆ..
ಆಗ ಮಾತ್ರ ನನ್ನ ತಪ್ಪಿಗೆ ಕ್ಷಮೆ
ಕನಸಿನ ರಾಜ್ಯದಿಂದ ಹೊರಬಂದು ಬದುಕನ್ನು ವಿಸ್ತಾರ ದೃಷ್ಟಿಕೂನದಿಂದ ನೋಡಬಯಸುತ್ತೇನೆ..
ಸೋಲಿನಿಂದ ಕಂಗೆಟ್ಟು ಬದುಕಿಗೆ ಕೊಳ್ಳಿ ಇದುವ ಹೀನ ಕಾರ್ಯ ವನ್ನು ನಾನೆಂದೂ ಮಾಡುವುದಿಲ್ಲ..